ಬ್ರಾಮಾ, ಜೋಸೆಫ್
	1740-1814. ಹಲವು ನಿತ್ಯಬಳಕೆಯ ಸಾಧನಗಳನ್ನು ತಯಾರಿಸಿದ ಆಂಗ್ಲ ಯಂತ್ರವಿನ್ಯಾಸಿ ಮತ್ತು ಉಪಜ್ಞೆಕಾರ. ಯಾರ್ಕ್‍ಷೈರಿನಲ್ಲಿ ರೈತನೊಬ್ಬನ ಮಗನಾಗಿ ಹುಟ್ಟಿ ಬ್ರಾಮಾ ಹದಿನಾರನೆಯ ವಯಸ್ಸಿನಲ್ಲಿ ದುರದೃಷ್ಟವಶಾತ್ ಕುಂಟನಾದ. ಆದ್ದರಿಂದ ಕೃಷಿ ಬಿಟ್ಟು ಹಳ್ಳಿಯ ಬಡಗಿಗೆ ಸಹಾಯಕನಾಗಿ ಕೆಲಸ ಮಾಡಿದ. ಮುಂದೆ ಲಂಡನ್ನಿನಲ್ಲಿ ನೆಲೆಸಿ ಖಾನೆ ಪೆಟ್ಟಿಗೆಗಳನ್ನು (ಕ್ಯಾಬಿನೆಟ್ಸ್) ತಯಾರಿಸತೊಡಗಿದ. ಇದು ಅವನನ್ನು ಬೀಗ ತಯಾರಿಕೆಗೆ ಪ್ರೇರಿಸಿತು. ಕಳ್ಳತನ ತಡೆಯಬಲ್ಲ ಸುಧಾರಿತ ಬೀಗವನ್ನು ಮೊದಲಿಗೆ ತಯಾರಿಸಿದಾತ ಬ್ರಾಮಾ (1788). ಈತ ತಯಾರಿಸಿದ ಬೀಗಗಳ ಹೊರನೋಟ ಒಂದೇ ತೆರನಿದ್ದರೂ ಒಳಗಡೆಯ ಚರಪಟ್ಟಿಗಳು ಬೇರೆ ಬೇರೆ ರೀತಿಗಳಲ್ಲಿದ್ದುವು. ಒಂದು ಬೀಗ ಮತ್ತೊಂದಕ್ಕಿಂತ ಭಿನ್ನವಾಗಿತ್ತು. ತಾನು ತಯಾರಿಸಿದ ಬೀಗವನ್ನು ತೆರೆದವನಿಗೆ 200ಗಿನಿಗಳ ಬಹುಮಾನ ಘೋಷಿಸಿದ್ದ. ಅವನ ಪಂಥಾಹ್ವಾನ ಸ್ವೀಕರಿಸಿ ಗೆಲ್ಲುವುದು ಮುಂದಿನ 67ವರ್ಷಗಳ ತನಕ ಯಾರಿಗೂ ಸಾಧ್ಯವಾಗಲಿಲ್ಲ. ಆಮೇಲೂ ಮೊದಲ ಬಾರಿಗೆ ಅದನ್ನು ತೆರೆಯಲು ಸಾಧ್ಯವಾದದ್ದು 51 ಗಂಟೆಗಳ ಸತತ ಪ್ರಯತ್ನಾನಂತರ ಮಾತ್ರ.

	ಮರದಸಾಮಾನುಗಳಲ್ಲಿ ನೆರವೂ ನಯವೂ ಆದ ಮೈಯನ್ನು ರೂಪಿಸಲು ಬ್ರಾಮಾ ರಚಿಸಿದ ಯಂತ್ರ ಆಧುನಿಕ ತೋಪಡಗಳಿಗೆ (ಪ್ಲೇನರ್) ಪೂರ್ವಭಾವಿಯಾಯಿತು. ನೋದಕ (ಪ್ರೊಪೆಲರ್) ಅಲ್ಪ ಬಲದಿಂದ ಅಧಿಕ ಭಾರ ಎತ್ತಲು ಉಪಯೋಗಿಸುವ ಹೈಡ್ರಾಲಿಕ್ ಪ್ರೆಸ್, ಬ್ಯಾಂಕ್ ನೋಟುಗಳಲ್ಲಿ ಸಂಖ್ಯೆಗಳನ್ನು ಅಂಕಿಸುವ ಯಂತ್ರ ಇವು ಬ್ರಾಮಾನ ಇತರ ಕೆಲವು ಉಪಜ್ಞೆಗಳು.
(ಎ.ಕೆ.ಬಿ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ